ಪಾವಂಜೆ, ಎನ್ ಜಿ
1892-1965. ಪ್ರಸಿದ್ಧ ಚಿತ್ರಕಲಾವಿದರು. ಉಡುಪಿ ಬಳಿಯ ಪಾವಂಜೆ ಗ್ರಾಮದವರಾದ ನರಹರಿರಾವ್ ಗೋಪಾಲಕೃಷ್ಣ ಪಾವಂಜೆಯವರು ಮುಂಬಯಿ ಜೆ.ಜೆ. ಕಲಾಶಾಲೆಯಲ್ಲಿ ಕಲಾಭ್ಯಾಸ ನಡೆಸಿದರು. ಚಿತ್ರಕಲೆಯಲ್ಲಿ ಪರಿಶ್ರಮ ಪಡೆದು ಬರಲು ಜರ್ಮನಿಗೆ ತೆರಳಿದರು. ಅಲ್ಲಿ ಕಲರ್ ಲಿತೋಗ್ರಫಿಯ ವಿಶೇಷ ಶಿಕ್ಷಣ ಪಡೆದುಕೊಂಡರು. ಅಲ್ಲಿದ್ದ ಏಳು ವರ್ಷಗಳಲ್ಲಿ ತೈಲ ಹಾಗೂ ಜಲವರ್ಣಗಳ ಚಿತ್ರ ರಚನೆಯಲ್ಲಿ ಹೆಚ್ಚಿನ ಪರಿಶ್ರಮವನ್ನು ಗಳಿಸಿಕೊಂಡರು. ಪಾಶ್ಚಾತ್ಯ ಕಲಾ ಸಂಪ್ರದಾಯವನ್ನು ಜೀರ್ಣಿಸಿಕೊಂಡು ಕಲಾಪ್ರೌಢಿಮೆಯನ್ನು ಸಾಧಿಸಿಕೊಂಡರು. ಅಲ್ಲಿ ಇವರು ನಕಲು ಮಾಡಿದಂಥ 'ಹೆಲ್‍ಮೆಟ್ ಎಂಬ ಸುಂದರ ತೈಲಕೃತಿ ಶ್ರೀರಂಗಪಟ್ಟಣದ ಸ್ಕಾಟ್ ಬಂಗಲೊ ಚಿತ್ರಸಂಗ್ರಹಾಲಯದಲ್ಲಿತ್ತು. ಅದು ಈಗ ಜಗನ್ಮೋಹನ ಚಿತ್ರಶಾಲೆಯಲ್ಲಿದೆ. 
ಜರ್ಮನಿಯಿಂದ ಹಿಂತಿರುಗಿದ (1922) ಪಾವಂಜೆ ಮೊದಲು ಬೆಂಗಳೂರಿನಲ್ಲಿ ನೆಲೆಸಿದರು. ಅಮೆಚೂರ್ ನಾಟ್ಯರಂಗ ಇವರನ್ನು ಆಕರ್ಷಿಸಿತು. ಅಪೂರ್ವ ಕಲಾಪ್ರೇಮಿಗಳೆನಿಸಿದ್ದ ಎಸ್.ಜಿ. ಶಾಸ್ತ್ರಿಗಳು ಪಾವಂಜೆಯವರ ಕಲಾ ಪ್ರೌಢಿಮೆಯನ್ನು ಕನ್ನಡ ಜನಕ್ಕೆ ಪರಿಚಯ ಮಾಡಿಕೊಟ್ಟರು.

ಪಾವಂಜೆ ಅವರು ಮೈಸೂರಿನ ಚಾಮರಾಜೇಂದ್ರ ಕಲಾಶಾಲೆಗೆ ಮುಖ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ಕಾಲ ದಸರಾ ವಸ್ತುಪ್ರದರ್ಶನದ ಕಾರ್ಯದರ್ಶಿಗಳಾಗಿದ್ದುದೂ ಉಂಟು. ಇವರಿಂದಾಗಿ ಚಾಮರಾಜೇಂದ್ರ ಕಲಾಶಾಲೆಯ ಗೌರವ ಘನತೆ ಹೊರಪ್ರಾಂತ್ಯಗಳಿಗೂ ಪ್ರಸರಿಸಿತು. ಮೈಸೂರಿಗೆ ಒಮ್ಮೆ ಬಂದ ವೈಸ್‍ರಾಯ್ ಲಾರ್ಡ್ ಇರ್ವಿನ್ನರಿಗೆ ಪಾವಂಜೆಯವರ ಎರಡು ನಿಸರ್ಗ ಚಿತ್ರಗಳನ್ನು ಅಂದಿನ ಸರ್ಕಾರ ಕಾಣಿಕೆಯಾಗಿ ಅರ್ಪಿಸಿತು.

ಕಲಾವಿದರ ಬಗ್ಗೆ ಪಾವಂಜೆ ಅವರಿಗೆ ಇದ್ದ ಆತ್ಮೀಯತೆ ಮಮತೆ ಅಪರೂಪವಾದುದು. ನಂಜುಂಡಸ್ವಾಮಿಗಳಂಥ ಕಲಾವಿದರು ಪಾವಂಜೆಯವರಿಂದ ಸ್ಫೂರ್ತಿಯನ್ನು ಪಡೆದಿದ್ದರು.

ನಿವೃತ್ತರಾಗಿ ಬೆಂಗಳೂರಿಗೆ ಬಂದ ಮೇಲೆ ಗಣೇಶಬೀಡಿ ಏಜಂಟರಾಗಿ ಪಾವಂಜೆ ಜೀವನ ನಡೆಸಿದರು. ಮೈಸೂರು ಚಿತ್ರಕಲಾ ಪರಿಷತ್ತಿನವರು ಶ್ರೀಯುತರನ್ನು ಗೌರವಿಸಿದ್ದಾರೆ.								   (ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ